ಸತ್ಯನ್, ಟಿ ಎಸ್
	1923-. ಪ್ರಸಿದ್ಧ ಛಾಯಾಗ್ರಾಹಕರು. 1923 ಡಿಸೆಂಬರ್ 18 ರಂದು ಮೈಸೂರಿನಲ್ಲಿ ಜನಿಸಿದರು. ಮೈಸೂರಿನ ಬನುಮಯ್ಯ ಪ್ರೌಢಶಾಲೆ ಹಾಗೂ ಮಹಾರಾಜ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ 1944ರಲ್ಲಿ ಬಿ.ಎ. ಪದವಿ ಗಳಿಸಿದರು. ಅನಂತರ ಛಾಯಾಚಿತ್ರಕಲೆಯಲ್ಲಿ ಆಸಕ್ತಿ ತಾಳಿದ ಇವರು ಅತ್ಯಂತ ಯಶಸ್ವೀ ಛಾಯಾಗ್ರಾಹಕ-ಪತ್ರಿಕಾಕರ್ತರಾಗಿದ್ದಾರೆ. ಜಗತ್ತಿನಾದ್ಯಂತ ಹಲವಾರು ವರ್ತಮಾನ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಛಾಯಾ ಚಿತ್ರಗಳನ್ನೂ ಲೇಖನಗಳನ್ನೂ ನೀಡಿದ್ದಾರೆ. ಸಮಕಾಲೀನ ಭಾರತದ ಚಿತ್ರವನ್ನು ಸಾಗ ರಾಂತರ ಜನತೆಗೆ ನೀಡುವಲ್ಲಿ ಶ್ಲಾಘ್ಯ ಕೆಲಸ ಮಾಡಿದ್ದಾರೆ. ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪತ್ರಿಕಾ ಬಳಗ 1948ರಲ್ಲಿ ಆರಂಭವಾದಾಗ ಅದರ ಆರಂಭ ಸಿಬ್ಬಂದಿ ವರ್ಗದವ ರಲ್ಲಿ ಇವರೂ ಒಬ್ಬರು. 1948 ರಿಂದಲೂ ನ್ಯೂಯಾರ್ಕಿನ ಬ್ಲಾಕ್ ಸ್ಟಾರ್ ಇಂಟರ್ ನ್ಯಾಷನಲ್ ಫೋಟೊ ಏಜೆನ್ಸಿಯ ಪ್ರತಿನಿಧಿಗಳಾಗಿದ್ದರು. 1950ರಲ್ಲಿ ಮುಂಬಯಿಯ ಇಲಸ್ಟ್ರೇಟಡ್ ವೀಕ್ಲಿ ಆಫ್ ಇಂಡಿಯ ಪತ್ರಿಕೆಯಲ್ಲಿ ಲೇಖನಕರ್ತೃವಾಗಿ ಕೆಲಸ ಮಾಡಿದ್ದಾರೆ. ನ್ಯೂಯಾರ್ಕಿನಿಂದ ಹೊರಡುತ್ತಿದ್ದ ಪ್ರತಿಷ್ಠಿತ ಲೈಫ್ ಪತ್ರಿಕೆಗಾಗಿ 1955-65ರ ವರೆಗೆ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಈ ಪತ್ರಿಕೆಯಲ್ಲಿ ಅತ್ಯಂತ ಹೆಚ್ಚು ಛಾಯಾಚಿತ್ರಗಳನ್ನು ಪ್ರಕಟಿಸಿದ ಭಾರತೀಯರೆಂದರೆ ಇವರೇ. ಲೈಫ್ ಸಂಸ್ಥೆ ಹಾಗೂ ಅಮೆರಿಕದ ಜಿಯೋಗ್ರಾಫಿಕ್ ಮ್ಯಾಗಜೈನ್ ಸಂಸ್ಥೆಗಳು ಪ್ರಕಟಿಸಿದ ಅನೇಕ ಕೃತಿಗಳಲ್ಲಿ ಇವರ ಛಾಯಾಚಿತ್ರಗಳಿವೆ.

	ಇವರ ಏಕಕರ್ತೃ-ಛಾಯಾಚಿತ್ರ ಪ್ರದರ್ಶನಗಳು ನವದೆಹಲಿ, ಮುಂಬಯಿ, ಕಾನ್‍ಪುರ, ಬೆಂಗಳೂರು, ಮೈಸೂರು, ಸಿಂಗಪೂರ್ ಮತ್ತು ಕೌಲಲಂಪೂರ್ ಗಳಲ್ಲಿ ನಡೆದಿವೆ. ಇವರ ಕೃತಿಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದೂರದರ್ಶನಗಳಲ್ಲಿ ಪ್ರದರ್ಶಿಸಲಾಗಿದೆ.  ತಮ್ಮ ಪ್ರಿಯ ವಿಷಯವಾದ ಛಾಯಾಪತ್ರಿಕೋದ್ಯಮವನ್ನು ಕುರಿತು ದೇಶವಿದೇಶಗಳಲ್ಲಿ ಉಪನ್ಯಾಸ ಮಾಡಿದ್ದಾರೆ; ಅನೇಕ ರೇಡಿಯೊ ಕಾರ್ಯಕ್ರಮಗಳನ್ನು ನೀಡಿದ್ದಾರೆ.  ನವದೆಹಲಿಯ ಪ್ರೆಸ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‍ನಲ್ಲಿ ಗೌರವ ಅಧ್ಯಾಪಕರೂ ಕೇಂದ್ರ ಲೋಕಸೇವಾ ಆಯೋಗಕ್ಕೆ ಛಾಯಾಗ್ರಹಣ ಮತ್ತು ಛಾಯಾಪತ್ರಿಕೋದ್ಯಮ ವಿಷಯದ ಸಲಹೆಗಾರರೂ ಆಗಿದ್ದರು.

	ಭಾರತದಲ್ಲಿ ಛಾಯಾ-ಪತ್ರಿಕೋದ್ಯಮದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಸತ್ಯನ್ ಅವರ ಕಾರ್ಯಕುಶಲತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪತ್ರಿಕಾ ವಲಯಗಳಲ್ಲಿ ಮೆಚ್ಚುಗೆ ಗಳಿಸಿದೆ. ವಿಶ್ವಸಂಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳೂ ಇವರ ಕೆಲಸಕ್ಕೆ ಪುರಸ್ಕಾರ ನೀಡಿವೆ. ವಿಶ್ವಸಂಸ್ಥೆಯ ಮಕ್ಕಳ ನಿಧಿಗೆ ಇವರು ಛಾಯಾ-ಪತ್ರಿಕೋದ್ಯಮ ಸಲಹೆಗಾರರಾಗಿದ್ದರು.

	ಛಾಯಾಗ್ರಹಣ ಕ್ಷೇತ್ರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿ ಸುವ ಇವರು ಬೆಂಗಳೂರು-ಮೈಸೂರು ಫೋಟೋಗ್ರಫಿ ಸೊಸೈಟಿಯ ಸ್ಥಾಪಕ ಸದಸ್ಯರು. 1950ರಲ್ಲಿ ಅದರ ಕಾರ್ಯದರ್ಶಿಯೂ ಆಗಿದ್ದರು.  ಜೊತೆಗೆ ನವದೆಹಲಿಯ ಕ್ಯಾಮರ ಸೊಸೈಟಿ ಆಫ್ ಇಂಡಿಯ ಹಾಗೂ ನ್ಯೂಸ್ ಕ್ಯಾಮೆರಾಮೆನ್ಸ್ ಅಸೋಸಿಯೇಷನ್‍ನ ಸದಸ್ಯರಾಗಿ ಪ್ರಪಂಚದಾ ದ್ಯಂತ ವಿಪುಲ ಪ್ರವಾಸ ಮಾಡಿರುವ ಇವರು ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್, ಪಶ್ಚಿಮ ಜರ್ಮನಿ, ಮಲೇಷಿಯ, ಸಿಂಗಪೂರ್, ಶ್ರೀಲಂಕಾ, ಆಫ್ಘಾನಿಸ್ತಾನ, ನೇಪಾಲ ಹಾಗೂ ಭೂತಾನಗಳಿಗೆ ವಿಶೇಷ ಆಹ್ವಾನಿತರಾಗಿ ಹೋಗಿ ಬಂದಿದ್ದಾರೆ.

	ಇವರಿಗೆ ಅನೇಕ ಗೌರವಗಳು ಲಭ್ಯವಾಗಿವೆ. ಜಪಾನಿನ ಪ್ರಪಂಚ ವಿಖ್ಯಾತ ಅಸಾದಿ ಶಿಯಿನ್ ಪತ್ರಿಕಾ ಸಂಸ್ಥೆ 1965ರಲ್ಲಿ ಏಷ್ಯನ್ ಛಾಯಾ ಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಛಾಯಾಗ್ರಹಣ ಕ್ಷೇತ್ರದ ಇವರ ವಿಶಿಷ್ಟ ಸಾಧನೆಗಾಗಿ 1977ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಇವರ ಕೃತಿಗಳು ಅನೇಕ ಪ್ರಶಸ್ತಿ, ಪದಕಗಳನ್ನು ಗಳಿಸಿವೆ. 1980ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. 1995ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಹಾಗೂ ರೋಟರಿ ಅಂತಾರಾಷ್ಟ್ರೀಯ ಪಾಲ್ ಹ್ಯಾರಿಸ್ ಫೆಲೋ ಷಿಪ್ ಮುಂತಾದ ಗೌರವಗಳು ಇವರಿಗೆ ಸಂದಿವೆ. ಸದ್ಯ ಇವರು ಮೈಸೂರಿನಲ್ಲಿ ಪತ್ನಿ ಮತ್ತು ಹಿರಿಯ ಮಗನೊಂದಿಗೆ ವಾಸವಾಗಿದ್ದಾರೆ.  ಇವರು ತಮ್ಮ ನೆನಪುಗಳನ್ನು ಮತ್ತು ಅಪರೂಪದ ಛಾಯಾಚಿತ್ರಗಳನ್ನು ಕಾಲಕ್ಕೆ ಕನ್ನಡಿ (2003) ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. 
                             							(ಎಸ್.ಎಸ್.ಎಮ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ